ಪುಲಕ -
 	ಮೃಗ ರೂಪ ಧರಿಸಿ ತಪಸ್ಸು ಮಾಡಿ, ತನ್ನ ದೇಹ ಸುವಾಸನಾಯುಕ್ತವಾಗುವಂತೆ ಶಿವನಿಂದ ವರ ಪಡೆದ ಒಬ್ಬ ದೈತ್ಯ. ದೇವತಾ ಸ್ತ್ರೀಯರು ಸುವಾಸನೆಯಿಂದಾಗಿ ಈತನಲ್ಲಿ ಮೋಹಗೊಂಡರು. ದೇವತೆಗಳು ಈ ಬಗ್ಗೆ ಶಿವನಲ್ಲಿ ಮೊರೆ ಇಟ್ಟರು. ಶಿವನು ಪುಲಕನನ್ನು ಕರೆದು ಆತ ಅಧರ್ಮ ಮಾರ್ಗದಲ್ಲಿ ನಡೆಯುತ್ತಿರುವುದಾಗಿಯೂ ಆದ್ದರಿಂದ ಕೂಡಲೇ ಸತ್ತು ಹೋಗಬೇಕೆಂದು ಆಜ್ಞಾಪಿಸಿದ. ಆಗ ಆ ದೈತ್ಯ ತನ್ನ ದೇಹದ ಕಂಪನ್ನು ಶಿವ ಹಾಗೂ ಪಾರ್ವತಿಯರೇ ಧರಿಸಬೇಕೆಂದು ಲೋಕ ಆ ಕಂಪನ್ನು ಮೃಗಮದವೆಂದು ಪೂಜಾದಿಗಳಿಗೆ ಬಳಸಬೇಕೆಂದೂ ತನ್ನ ಅನಂತರ ಕಂಪು ತನ್ನ ಜಾತಿಯ ಮೃಗಗಳಲ್ಲಿ ಉಳಿದು ಬರಬೇಕೆಂದೂ ಹೇಳಿದ. ಶಿವ ಆ ಬೇಡಿಕೆಗಳನ್ನು ಒಪ್ಪಿದ. ಪುಲಕ ತನ್ನ ಮೃಗದೇಹವನ್ನು ತ್ಯಜಿಸಿದ. ಆ ಜಾತಿಯ ಮೃಗಗಳ ದೇಹದ ಕಂಪೇ ಪ್ರಖ್ಯಾತವಾದ ಕಸ್ತೂರಿಯಾಗಿ ಇಂದಿಗೂ ಪೂಜಾವಸ್ತುವಾಗಿ ಉಳಿದುಬಂದಿದೆ.

	ಪುಲಕ ಎಂಬ ಒಬ್ಬ ಪ್ರಜಾಪತಿ ಇದ್ದಾನೆ. ಆತ ಬ್ರಹ್ಮನ ಒಬ್ಬ ಮಾನಸ ಪುತ್ರ. ದಕ್ಷನ ಒಬ್ಬ ಮಗಳಾದ ಕ್ಷಮೆ ಅವನ ಹೆಂಡತಿ.												(ಡಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ